	
ಉದಯಗಿರಿ: 1. ಒರಿಸ್ಸ ರಾಜ್ಯದಲ್ಲಿ ಭುವನೇಶ್ವರದ ಬಳಿ ಇರುವ ಬೆಟ್ಟ. 2.ಮಧ್ಯಪ್ರದೇಶದ ಬೆಸನಗರದ ಸಮೀಪದಲ್ಲೂ ಇದೇ ಹೆಸರಿನ ಒಂದು ಬೆಟ್ಟವಿದೆ. ಎರಡು ಕಡೆಗಳಲ್ಲೂ ಗುಹಾಂತರ್ದೇವಾಲಯಗಳುಂಟು. ಮೊದಲನೆಯದರ ಜೈನ ಗುಹೆಗಳಲ್ಲಿ ಹಲವು ಕಲಿಂಗರಾಜ ಖಾರವೇಲನ (ನೋಡಿ) ಕಾಲವೆಂದು (ಸು. 2ನೆಯ ಶತಮಾನ) ತರ್ಕಿಸಲಾಗಿದೆ. ಮಧ್ಯಪ್ರದೇಶದ ಉದಯಗಿರಿಯಲ್ಲಿರುವ ಗುಹಾಲಯಗಳನ್ನು ಗುಪ್ತಚಕ್ರವರ್ತಿ ಎರಡನೆಯ ಚಂದ್ರಗುಪ್ತ ನಿರ್ಮಿಸಿದ. ಎರಡರಲ್ಲೂ ಇರುವ ಶಿಲ್ಪಗಳು ಸುಂದರವಾಗಿವೆ. ಒರಿಸ್ಸದ ಉದಯಗಿರಿ ಗುಹೆಗಳಲ್ಲಿ ಮಂಚಪುರಿ ಗುಹೆಯನ್ನು ಆರ್ಯ ಮಹಾಮೇಘವಾಹನ ಮಹಾರಾಜ ವಕ್ರದೇವ ಕೊರೆಯಿಸಿದ. ಉದಯಗಿರಿಯ ಗವಿಗಳಲ್ಲಿ ರಾಣಿಗುಂಫ ಎಂಬ ಗವಿ ಎಲ್ಲಕ್ಕೂ ದೊಡ್ಡದಿದ್ದು ಅದರ ಒಳಭಾಗದಲ್ಲಿ ಅನೇಕ ಮೂರ್ತಿಗಳ ಸಾಲುಗಳನ್ನು ಕೆತ್ತಲಾಗಿದೆ. ಇವು ಭವ್ಯ ಮತ್ತು ಚೈತನ್ಯಪೂರ್ಣ ಕಲಾಕೃತಿಗಳು. ಇವುಗಳಲ್ಲಿನ ಬೌದ್ಧ ಶಿಲ್ಪಗಳ ಪೈಕಿ ಬೋಧಿವೃಕ್ಷದ ಸುತ್ತ ಸ್ತ್ರೀಪುರುಷರು ವಾದ್ಯಗಳನ್ನು ನುಡಿಸಿ ಹಾಡಿ ನರ್ತಿಸುತ್ತಿರುವ ಚಿತ್ರ ಅತ್ಯಂತ ಆಕರ್ಷಕವಾದದ್ದು.	(ಬಿ.ಟಿ.;ಎಸ್.ಎಂ.;ಆರ್.ಎಸ್.ಪಿ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ